ಗ್ರುಂಟ್‍ವಿಗ್, ನಿಕೋಲೈ ಫ್ರೆಡರಿಕ್ ಸೆವರೀನ್

1783 - 1872. ಡೇನಿಷ್ ಕವಿ, ತತ್ತ್ವಜ್ಞಾನಿ, ರಾಜನೀತಿಜ್ಞ, ಸಂಶೋಧಕ, ಸಮಾಜ ಸುಧಾರಕ ಮತ್ತು ಜನತಾ ಶಾಲೆಗಳ ಜನಕ. ಹುಟ್ಟಿದ್ದು ಜಿಲೆಂಡ್ ದ್ವೀಪದ ಉಡ್ಬಿಯಲ್ಲಿ. ಬಡಕುಟುಂಬದಲ್ಲಿ ಪಾದ್ರಿಯೊಬ್ಬನ ಮಗನಾಗಿ ಹುಟ್ಟಿದ ಈತನ ಪ್ರಾರಂಭದ ವಿದ್ಯಾಬ್ಯಾಸ ಹಳ್ಳಿಯಲ್ಲಿಯೇ ನಡೆಯಿತು. ಅನಂತರದ ವಿದ್ಯಾಭ್ಯಾಸ ಕೋಪೆನ್‍ಹೇಗನ್ ವಿಶ್ವವಿದ್ಯಾಲಯದಲ್ಲಿ ಆಯಿತು. ಐಸ್ಲೆಂಡಿಕ್ ಭಾಷೆಯನ್ನು ವಿಶೇಷವಾಗಿ ಅಭ್ಯಸಿಸಿದ್ದ ಈತ ಶಿಕ್ಷಕನಾಗಿ ನಿಂತ. ಅನಂತರ ಪಾದ್ರಿಯಾದ. ಈತನ ದೊಡ್ಡಪ್ಪನ ಮಗನಾದ ಹೆನ್ರಿಕ್ ಸ್ಟಾಫಿನ್ಸ್‍ನ ಪ್ರಭಾವಕ್ಕೊಳಗಾಗಿ ಷೇಕ್ಸ್‍ಪೀಯರ್, ಷಿಲರ್, ಫಿಶೆ, ಮುಂತಾದವರ ಕೃತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ. ಜನಪದ ಸಾಹಿತ್ಯದ ಬಗ್ಗೆ ಚಿಕ್ಕಂದಿನಿಂದ ಒಲವು ಇದ್ದುದರಿಂದ ರೈತರು ಹಾಡುತ್ತಿದ್ದ ಗೀತೆಗಳು ಇವನ ಮೇಲೆ ತುಂಬ ಪ್ರಭಾವ ಬೀರಿದವು. ಇದೇ ಸಮಯಕ್ಕೆ ಈತನ ಮೊದಲ ಕವನ ಸಂಕಲನ ಆನ್ ದಿ ಸಾಂಗ್ಸ್ ಇನ್ ದಿ ಎಡ ಪ್ರಕಟವಾಯಿತು. ಈ ಕೃತಿ ಅಷ್ಟಾಗಿ ಯಶಸ್ಸು ತರದೆ ಹೋದರೂ ಅನಂತರ ಪ್ರಕಟಿಸಿದ ನಾರ್ದರನ್ ಮೈಥಾಲಜಿ (1808) ಸಾಕಷ್ಟು ಯಶಸ್ಸು ತಂದಿತು. ಅನಂತರ ಬರೆದ ದಿ ಡಿಕ್ಷೈನ್ ಆಫ್ ದಿ ಹಿರೋಯಿಕ್ ಲೈಫ್ ಇನ್ ದಿ ನಾರ್ತ್ (1809 -1811) ಎಂಬ ಎರಡು ಸಂಪುಟಗಳ ಸುದೀರ್ಘ ಮಹಾಕಾವ್ಯ ಈತನ ಪ್ರತಿಷ್ಠೆಯನ್ನು ಹೆಚ್ಚಿಸಿತು.

ಕ್ರೈಸ್ತ ಪಾದ್ರಿಯಾದ ಈತ ಮತಧರ್ಮದ ಬಗ್ಗೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದುದರಿಂದ ಕೆಲ ಕ್ರೈಸ್ತಮತೀಯರು ತಿರುಗಿ ಬಿದ್ದು ಏಳು ವರ್ಷಗಳ ಕಾಲ ಈತ ಮತೋಪದೇಶ ಮಾಡಬಾರದೆಂದು ಪ್ರತಿಬಂಧಕಾಜ್ಞೆಯನ್ನು ವಿಧಿಸಿದರು. ಇದೇ ಹೊತ್ತಿಗೆ ಇಂಗ್ಲೆಂಡಿಗೆ ಬಂದ ಈತ ಆಂಗ್ಲೋ - ಸ್ಯಾಕ್ಸನ್ ಅಭ್ಯಾಸ ಮಾಡಿ ತನ್ನ ಮತಧರ್ಮವನ್ನು ಕುರಿತ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸಿದ. ಅನಂತರ 1832 ರಲ್ಲಿ ಮತ್ತೆ ಪಾದ್ರಿಯಾಗಿ ತನ್ನ ಜೀವಿತದ ಕೊನೆಯವರೆಗೂ ಅದೇ ಕಾಯಕದಲ್ಲಿ ಮುಂದುವರಿದ. ಈತ 1812 - 17 ರ ಅವಧಿಯಲ್ಲಿ ಪ್ರಕಟಿಸಿದ ಕೃತಿಗಳಲ್ಲಿ ಮುಖ್ಯ ಹಾಗೂ ವೈಶಿಷ್ಟ್ಯಪೂರ್ಣ ಕೃತಿ ಎಂದರೆ ರ್ಹೈಮ್ ಅಫ್ ರೋಸಲಿಂಡೆ. 1816 - 1819 ರ ವರೆಗೆ ವಿವಾದಾತ್ಮಕ ಪತ್ರಿಕೆ ಎನಿಸಿದ್ದ ಡ್ಯಾನೆವಿರ್ಕೆ ಪತ್ರಿಕೆಯ ಸಂಪಾದಕನಾಗಿದ್ದ. 1837 - 41 ರ ಅವಧಿಯಲ್ಲಿ ಸಾಂಗ್ಸ್ ಫಾರ್ ದಿ ಡೇನಿಷ್ ಚರ್ಚ್ ಎಂಬ ಆಂಗ್ಲೋ-ಸ್ಯಾಕ್ಸನ್ ಪದ್ಯವನ್ನು ಸಂಗ್ರಹಿಸಿ ಡೇನಿಷ್ ಭಾಷಾಂತರದೊಡನೆ ಪ್ರಕಟಿಸಿದ.

ಡೇನಿಷ್ ಸಾಹಿತ್ಯದ ಗ್ರುಂಟ್‍ವಿಗ್‍ನ ಸ್ಥಾನ ಅಸಾಧಾರಣವಾದುದು. ಈತನ ಕಾವ್ಯಕೃತಿಗಳು ಏಳು ಸಂಪುಟಗಳಲ್ಲಿ ಈತನ ಮರಣಾನಂತರ ಪ್ರಕಟವಾಗಿದೆ.

ಗ್ರುಂಟ್‍ವಿಗ್ ಹೆಸರು ಉಳಿದಿರುವುದು ಆತನ ಶಿಕ್ಷಣತತ್ತ್ವ ಹಾಗೂ ಅದನ್ನು ಕಾರ್ಯಗತಗೊಳಿಸಲು ಆರಂಭಿಸಿದ ಜನತಾಶಾಲೆಗಳಿಂದ.

ಡೇನರೂ ಸಹ ಜಾಗೃತರಾಗಬೇಕೆಂದು ಈತನ ಆಕಾಂಕ್ಷೆಯಾಗಿತ್ತು. ಜನತೆ ಸರ್ಕಾರದ ಆಡಳಿತದಲ್ಲಿ ಪರಿಣಾಮಕಾರಿಯಾಗಿ ಪಾತ್ರವಹಿಸಬೇಕು. ಅದಕ್ಕೆ ವಿದ್ಯೆಬೇಕು. ಓದಿಗೂ ಮತ್ತು ಜೀವನಕ್ಕೂ ನಿಕಟ ಸಂಬಂಧವಿರಬೇಕು.  ಜೀವನದ ಸಮಸ್ಯೆಗಳನ್ನು ನಿರ್ಭಯವಾಗಿ ಮತ್ತು ನಿಸ್ಸಂಕೋಚವಾಗಿ ಚರ್ಚಿಸಬೇಕು. ಉಪಾದ್ಯಾಯರು ವಿದ್ಯಾರ್ಥಿಗಳೊಡನೆ ನಿಕಟ ಸಂಪರ್ಕ ಹೊಂದಿರಬೇಕು. ಶಾಲಾ ಕಾಲೇಜುಗಳಲ್ಲಿ ಈ ರೀತಿಯ ಶಿಕ್ಷಣ ದೊರೆಯದು. ನಿದ್ರಾವಸ್ಥೆಯಲ್ಲಿರುವವರನ್ನು ಕೇವಲ ಪುಸ್ತಕಗಳು ಎಚ್ಚರಿಸಲಾರವು. ಎಲ್ಲ ವರ್ಗದ ಜನರಿಗೂ ಶಿಕ್ಷಣವನ್ನು ತಾಯಿನುಡಿಯಲ್ಲೇ ನೀಡಬೇಕು. ಈ ತರಹ ಶಿಕ್ಷಣ ಜನತಾಶಾಲೆಗಳಲ್ಲಿ ಅನುಭವಿ ಉಪಾದ್ಯಾಯರ ಮೂಲಕವೇ ನಡೆಯಬೇಕು. ಮಾನವನ ಜೀವಿತದಲ್ಲಿ 18 ರಿಂದ 20 ವಯಸ್ಸಿನ ಅವಧಿ ಬಹಳ ಪ್ರಾಮುಖ್ಯವಾದುದು. ಅವನು ಆಗತಾನೆ ಜೀವನ ಸಂಗ್ರಾಮದಲ್ಲಿ ಕಾಲಿಟ್ಟಿರುತ್ತಾನೆ. ಅವನಲ್ಲಿ ವಿಚಾರಪ್ರವೃತ್ತಿ ಅಂಕುರಿಸಿರುತ್ತದೆ. ಬುದ್ಧಿ ಮತ್ತು ಮನಸ್ಸು ಕೂಡಿ ಕೆಲಸ ಮಾಡುವ ಕಾಲ ಅದು. ಆ ವಯಸ್ಸಿನ ಯುವಕರನ್ನು ಅಲ್ಪಸಂಖ್ಯೆಯಲ್ಲಿ ಒಂದು ಕಡೆ ಕಲೆ ಹಾಕಿ ಅವರಿಗೆ ನಿಜವಾದ ಜೀವನ ಶಿಕ್ಷಣ ನೀಡಬೇಕು. ಗ್ರುಂಟ್‍ವಿಗ್‍ನ ಶಿಕ್ಷಣ ತತ್ತ್ವಸಾರ. ಸಂಪ್ರದಾಯ ಶರಣರಿಗೆ ಈ ಮಾತು ಹಿಡಿಸಲಿಲ್ಲ. ಕೆಲವರು ಮಾತ್ರ ಇದನ್ನು ಒಪ್ಪಿದರು. ಒಟ್ಟಿನಲ್ಲಿ ಗ್ರುಂಟ್‍ವಿಗ್‍ನ ಕಲ್ಪನೆಗಳು ಜನತಾಶಾಲೆಗಳ ಮೂಲಕವೇ ರೂಪಗೊಂಡವು. ಇಂಥ ಶಾಲೆಗಳಿಗೆ ಬೆಂಬಲ ಕೊಟ್ಟವರಲ್ಲಿ ಕ್ರಿಶ್ಚನ್ ಕೋಲ್ಡ್‍ನೂ ಒಬ್ಬ. (ನೋಡಿ- ಕೋಲ್ಡ್,-ಕ್ರಿಶ್ಚನ್) ಈತ ಡೆನ್ಮಾರ್ಕಿನ ಜೀವನವನ್ನು ಸುಧಾರಿಸಲು ಬಹುವಾಗಿ ಶ್ರಮಿಸಿದ. ಕೆಲಕಾಲ ಈತ ರಾಜ್ಯಾಂಗ ಸಮಿತಿ ಹಾಗೂ ಪಾರ್ಲಿಮೆಂಟುಗಳ ಸದಸ್ಯನಾಗಿದ್ದ. ರೈತರಿಗೆ ಭೂಮಿಯ ಒಡೆತನವನ್ನು ದೊರಕಿಸಿಕೊಟ್ಟ ಕೀರ್ತಿ ಈತನದು. 							(ಟಿ.ಆರ್.ಎನ್.; ಪಿ.ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ